ತಾಮ್ಸನ್, ಜೇಮ್ಸ್ 2

1700-1748. ಸ್ಕಾಟ್ ಲೆಂಡಿನ ಕವಿ ಹಾಗೂ ನಾಟಕಕಾರ, ಹುಟ್ಟಿದ್ದು ರಾಕ್ಸ್ ಬರ್ಗ್‍ಷೈರ್‍ನ ಎಡ್ನಾಮ್‍ನಲ್ಲಿ. ಜೆಡ್ಬರ್ಗ್‍ನ ಗ್ರಾಮರ್ ಶಾಲೆಯಲ್ಲಿ ಶಿಕ್ಷಣಪಡೆದ ಅನಂತರ 1715ರಲ್ಲಿ ಎಡಿನ್‍ಬರೊ ವಿಶ್ವವಿದ್ಯಾಲಯ ಸೇರಿದ. 1719ರಿಂದ 1725 ರ ವರೆಗೆ ಪಾದ್ರಿಯಾಗಲು ದೇವತಾಶಾಸ್ತ್ರವನ್ನು ಅಭ್ಯಾಸ ಮಾಡಿದ. ಬಿಡುವಿನ ಕಾಲವನ್ನು ಜಾನ್ ವಿಲ್ಟನ್ ಹಾಗೂ ಎಡ್ಮಂಡ್ ಸ್ಪೆನ್ಸರರ ಕೃತಿಗಳನ್ನು ಓದುವುದರಲ್ಲೂ ಕವಿತೆಗಳನ್ನು ರಚಿಸುವುದರಲ್ಲೂ ಕಳೆದ. ಇಲ್ಲಿಯೇ ಈತ ಮೂರು ಕವಿತೆಗಳನ್ನು ಪ್ರಕಟಿಸಿದ. ಕೊನೆಗೆ ದೇವತಾಶಾಸ್ತ್ರದ ಅಭ್ಯಾಸ ಹಿಡಿಸದೆ ಅದನ್ನು ಬಿಟ್ಟು 1725 ರಲ್ಲಿ ಸಾಹಿತಿಯಾಗಿ ಜೀವನ ನಡೆಸಲು ಲಂಡನ್ನಿಗೆ ತೆರಳಿದ. ಅಲ್ಲಿ ಈತನಿಗೆ ಸಾಹಿತ್ಯರಚನೆಗೆ ಅನುಕೂಲವಾದ ವಾತಾವರಣ ದೊರೆಯಿತು. ಈ ವೇಳೆಗೆ ಈತ ಆಫ್ ಎ ಕಂಟ್ರಿ ಲೈಫ್ ಎಂಬ ಕವಿತೆ ಬರೆದಿದ್ದ. 1726ರಲ್ಲಿ ಈತ ಬರೆದ ವಿಂಟರ್ ಎಂಬ ನಿಸರ್ಗ ಕವಿತೆ ಅನಿರೀಕ್ಷತ ಯಶಸ್ಸು ತಂದಿತು. ಅನಂತರ ಸಮ್ಮರ್ (1727) ಹಾಗೂ ಸ್ಪ್ರಿಂಗ್ (1728) ಎಂಬ ಕವಿತೆಗಳು ಪ್ರಕಟವಾದವು. 1730 ರಲ್ಲಿ ಈ ಮೂರು ಕೃತಿಗಳು ಮತ್ತು ಆಟಮ್ ಎಂಬ ಕವಿತೆ ಹಾಗೂ ಹಿಮ್ ಆನ್ ದಿ ಸೀಸನ್ಸ್ ಎಂಬ ಋತು ಸ್ತೋತ್ರಗೀತೆ ಇವು ಒಂದುಗೂಡಿ ದಿ ಸೀಸನ್ಸ್ ಎಂಬ ಹೆಸರಿನಿಂದ ಪ್ರಕಟವಾದವು. ಈ ಕೃತಿಯ ಪರಿಷ್ಕøತ ಆವೃತ್ತಿ 1744 ರಲ್ಲಿ ಪ್ರಕಟವಾಯಿತು. ಇದರಲ್ಲಿ ಕಾಣಬರುವ ಮಿಲ್ಟನ್ನನ ಅನುಕರಣೆ, ಲ್ಯಾಟಿನ್ನಿನಿಂದ ಇಂಗ್ಲಿಷಿಗೆ ತೆಗೆದುಕೊಂಡ ಪದಗಳ ಪ್ರಯೋಗ, ಸರಳರಗಳೆಯ ಬಳಕೆ, ಹಳ್ಳೊ ಜೀವನದ ಚಿತ್ರಣ, ಆಡಂಬರದ ಶೈಲಿ, ಔದಾರ್ಯ ಮತ್ತು ಪರೋಪಕಾರಿ ವಿಷಯಗಳಿಗೆ ಸಂಬಂಧಿಸಿದ ಭಾವನೆಗಳು. ವೈಜ್ಞಾನಿಕ ವಿಷಯಗಳನ್ನು ಮಧ್ಯದಲ್ಲಿ ಸೇರಿಸುವಿಕೆ - ಇವು ತಾಮ್‍ಸನ್ನನ ಅಭಿರುಚಿ ಹಾಗೂ ವಿಶಾಲ ದೃಷ್ಟಿಯನ್ನು ಸೂಚಿಸುತ್ತವೆ. 1727ರಲ್ಲಿ ಅದೇ ವರ್ಷ ತೀರಿಕೊಂಡಿದ್ದ ವಿಜ್ಞಾನಿ ಐಸಾಕ್ ನ್ಯೂಟನ್ನನ ಗೌರವಾರ್ಥ ಎ ಪೊಯಮ್ ಟು ದಿ ಸೇಕ್ರೆಡ್ ಮೆಮೊರಿ ಆಫ್ ಸರ್ ಐಸಾಕ್ ನ್ಯೂಟನ್ ಎಂಬ ಕವಿತೆಯನ್ನು ಬರೆದ. ಸರಳರಗಳೆಯಲ್ಲಿ ರಚಿಸಿದ ಲಿಬರ್ಟಿ ಎಂಬ ಈತನ ಕೃತಿಯ ಮೊದಲಿನ ಮೂರು ಭಾಗಗಳು 1725ರಲ್ಲೂ ಕೊನೆಯ ಎರಡು ಭಾಗಗಳು 1736ರಲ್ಲೂ ಪ್ರಕಟವಾದವು. ಇವು ಅನೇಕ ದೇಶಗಳ ಹಾಗೂ ಜನರ ಬಗೆಗಿನ ಮಾಹಿತಿಗಳನ್ನೊಳಗೊಂಡಿವೆ. ಜಾಲ್ರ್ಸ್ ಟಾಲ್ಬಟ್ ಈತನಿಗೆ 1733ರಲ್ಲಿ ಒಂದು ಮಾನ್ಯವನ್ನು ದೊರಕಿಸಿಕೊಟ್ಟ. ಆದರೆ ಆತ ತೀರಿಕೊಂಡ (1737) ಬಳಿಕ ಆ ಮಾನ್ಯ ನಿಂತು ಹೋಯಿತು. 1744ರಲ್ಲಿ ಲಾರ್ಡ್ ಲಿಟಲ್‍ಟನ್ ಇನ್ನೊಂದು ಮಾನ್ಯವನ್ನು ಕೊಡಿಸುವವರೆಗೆ ಈತನ ಆರ್ಥಿಕ ಸ್ಥಿತಿ ಅಷ್ಟು ಉತ್ತಮವಾಗಿರಲಿಲ್ಲ. ಈ ಅವಧಿಯಲ್ಲಿ ಈತ ಕೆಲವು ನಾಟಕಗಳನ್ನು ಬರೆದ. 1730ರಲ್ಲಿ ಬರೆದ ಸೋಫೊನಿಸ್ಬಾ ಎಂಬ ನಾಟಕ ಚೆನ್ನಾಗಿತ್ತಾದರೂ ಅಷ್ಟು ಯಶಸ್ವಿಯಾಗಲಿಲ್ಲ. ಅಗಮೆಮ್ನಾನ್ (1738)ಎಂಬುದು ಈತನ ಇನ್ನೊಂದು ನಾಟಕ. 1740ರಲ್ಲಿ ಡೇವಿಡ್ ಮ್ಯಾಲೆಟ್ಟನ ಸಹಕಾರದಿಂದ ರಚಿಸಿದ ದಿ ಮಾಸ್ಕ್ ಆಫ್ ಆಲ್ಪ್ರೆಡ್ ಎಂಬ ನಾಟಕ ಗಮನಾರ್ಹವಾದ್ದು. ಎಡ್ವರ್ಡ್ ಅಂಡ್ ಎಲೀಯನೋರಾ (1739) ಟಾನ್ ಕ್ರೆಡ್ ಅಂಡ್ ಸಿಜಿಸ್ ಮಂಡಾ (1745) ಕೊರಿಯೊಲೇನಸ್ (1748) - ಇವು ಈತನ ನಾಟಕಗಳು. ಇವು ತಾತ್ಪುರ್ಯದಲ್ಲಿ ದುರಂತನಾಟಕಗಳಾದರೂ ಸಮಕಾಲೀನ ರಾಜಕೀಯ ವಿಚಾರಗಳನ್ನೊಳಗೊಂಡಿವೆ. ತಾಮ್ಸ್‍ನ್ನನ ನಾಟಕಗಳು ಆ ಕಾಲದ ನಾಟಕರಂಗ ಮತ್ತು ಅಭಿರುಚಿಗಳು ಇಂಥ ಕೀಳುಮಟ್ಟಕ್ಕೆ ಇಳಿದಿದ್ದುವೆಂಬುದಕ್ಕೆ ಉದಾಹರಣೆಗಳಾಗಿವೆ. ಬ್ರಿಟಿಷರು ಎಂದಿಗೂ ಗುಲಾಮರಾಗರೆಂಬ ಭಾವನೆ ಈತನದು. ವ್ಯಾಪಾರಿ ಮನೋಭಾವ ಬ್ರಿಟಿಷರು ಸಾಮ್ರಾಜ್ಯ ಶಾಹಿ ಧೋರಣೆಗಳನ್ನು ತಾಳಲೇಬೇಕೆಂಬುದು ಈತನ ದೃಢಮತ. ಈತ ನಿಷ್ಠಾವಂತ ದೇಶಾಭಿಮಾನಿ.

ತಾಮ್ಸನ್ ಕಾವ್ಯರಚನೆಗೆ ಪ್ರಾರಂಭಿಸಿದಾಗ ಆಂಗ್ಲ ಕಾವ್ಯದಲ್ಲಿ ಅಸ್ವಾಭಾವಿಕತೆ ಪ್ರಧಾನವಾಗಿತ್ತು. ಇಂಥ ಕಾಲದಲ್ಲಿ ಈತ ನಿಸರ್ಗವನ್ನು ಯಥಾವತ್ತಾದ, ಸರಳವಾದ, ಭಾವನಾ ಪ್ರಧಾನ ರೀತಿಯಲ್ಲಿ ಚಿತ್ರಿಸಿದ. ಈತನ ನಿಸರ್ಗದ ಹಾಗೂ ಶ್ರೀಸಾಮಾನ್ಯನ ಸೂಕ್ಷ್ಮ ಹಾಗೂ ಉತ್ಸಾಹಪೂರ್ಣ ನಿರೂಪಣೆ, ಈತನ ಕೃತಿಗಳಲ್ಲಿ ಹಲವೆಡೆಗಳಲ್ಲಿ ಕಂಡುಬರುವ ನಿಷ್ಕøಷ್ಟವಾದ ವರ್ಣನಾತ್ಮಕ ಪದವಿನ್ಯಾಸ, ವಿಷಯದ ಕಾಲ್ಪನಿಕ ಚಿತ್ರಣ ಹಾಗೂ ಭಾವನಾತ್ಮಕ ಪರಿಣಾಮವನ್ನು ಸಾಧಿಸುವುದಕ್ಕೆ ನಡೆಸುವ ಪ್ರಾಮಾಣಿಕ ಪರಿಶ್ರಮ- ಇವುಗಳಿಂದಾಗಿ ಈತ ಆಂಗ್ಲಸಾಹಿತ್ಯದಲ್ಲಿ ಮುಂದೆ ಬರಲಿದ್ದ ರೊಮ್ಯಾಂಟಿಕ್ ಯುಗದ ಪ್ರಮುಖ ಸೂಚಕನಾದ.
(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ